ಚಂದ್ರೊಬ್ಬಲಬ್ಬೆ - 
843-870ರಲ್ಲಿ ಆಳಿದ ಗಂಗವಂಶದ ದೊರೆ ನೀತಿಮಾರ್ಗ ಎರೆಗಂಗನ ಕಿರಿಯ ಮಗ 1ನೆಯ ಬೂತುಗನ ರಾಣಿ; ರಾಷ್ಟ್ರಕೂಟ ದೊರೆ ಅಮೋಘವರ್ಷನ ಮಗಳು. ನೀತಿಮಾರ್ಗ ಎರೆಗಂಗನಿಗೆ ಹಿಂದೆ ಗಂಗ ರಾಜ್ಯವನ್ನು ರಾಚಮಲ್ಲ ಆಳುತ್ತಿದ್ದಾಗ ರಾಷ್ಟ್ರಕೂಟರ ಸೇನಾನಿ ಬಂಕೇಶ ಗಂಗರಾಜ್ಯದ ಒಂದು ಭಾಗವನ್ನು ಆಕ್ರಮಿಸಿದ್ದ. ಈ ಭಾಗವನ್ನು ಪುನಃ ವಶಪಡಿಸಿಕೊಳ್ಳುವುದರಲ್ಲಿ ರಾಚಮಲ್ಲ ಜಯಪ್ರದನಾಗಲಿಲ್ಲ. ನೀತಿಮಾರ್ಗ ಎರೆಗಂಗ ರಾಜಾರಾಮಡು ಎಂಬ ಸ್ಥಳದಲ್ಲಿ ಬಂಕೇಶನೊಡನೆ ನಡೆಸಿದ ಕದನ ನಿರ್ಣಾಯಕವಾಗಲಿಲ್ಲ. ಗಂಗರನ್ನು ಅಡಗಿಸಲು ಸಾಧ್ಯವಿಲ್ಲವೆಂಬುದನ್ನು ಅರಿತ ರಾಷ್ಟ್ರಕೂಟ ದೊರೆ ಅಮೋಘವರ್ಷ ಚಂದ್ರೊಬ್ಬಲಬ್ಪೆಯನ್ನು ಬೂತುಗನಿಗೆ ವಿವಾಹ ಮಾಡಿಕೊಟ್ಟು ಗಂಗರೊಂದಿಗೆ ಸಂಬಂಧ ಬೆಳೆಸಿದ. ಚಂದ್ರೊಬ್ಬಲಬ್ಪೆ ಅತ್ಯಂತ ಸುಂದರಿಯೂ ಗುಣವತಿಯೂ ಆಗಿದ್ದಳೆಂದೂ ನಾಟ್ಯಕಲೆಯಲ್ಲಿ ವಿಶೇಷ ಪರಿಶ್ರಮ ಪಡೆದಿದ್ದಳೆಂದೂ ಶಾಸನಗಳು ತಿಳಿಸುತ್ತವೆ. 883-920ರಲ್ಲಿ ಆಳಿದ ಗಂಗರಾಜ ಎರೆಗಂಗ ಚಂದ್ರೊಬ್ಬಲಬ್ಬೆಯ ಮಗ.						(ಎ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ